12ನೆಯ ಶತಮಾನದ ಒಬ್ಬ ವಚನಕಾರ. ಹುಟ್ಟು ಹೆಸರು ಮುದ್ದಣ. ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತ ಶಿವಾನುಭವವನ್ನು ಸಾರುವ ನರ್ತನಕಾಯಕವನ್ನು ಕೈಗೊಂಡ. ಮದುವೆಯಾದನಾದರೂ ಹೆಂಡತಿ ಅವನೊಡನೆ ಬಾಳ್ವೆ ಮಾಡಲಿಲ್ಲ. ಗಂಡನ ಅಧ್ಯಾತ್ಮದ ಹುಚ್ಚು ಸತಿಗೆ ಹಿಡಿಸಲಿಲ್ಲ. ಸಂಪತ್ತು ಮತ್ತು ಸುಖಾನುಭವಕ್ಕೆ ಮನಸೋತ ಅವಳು ಅನ್ಯಪುರುಷಸಂಗವನ್ನು ಮಾಡಿದಂತೆ ತೋರುತ್ತದೆ. ಸತಿಯ ಈ ನಡತೆಯಿಂದ ಘಟ್ಟಿವಾಳಯ್ಯನ ಮನಸ್ಸು ಸಂಪುರ್ಣವಾಗಿ ವೈರಾಗ್ಯದತ್ತ ತಿರುಗಿತು. ಹೊನ್ನು ಭೂಪಾಲರಿಗೆ, ಹೆಣ್ಣೊಲಿದ ಕಾಮುಕಗೆ, ಮಣ್ಣು ಬಲವಂತಂಗಲ್ಲದೆ ಬರಿಯ ಭ್ರಾಂತಿಯಲ್ಲಿ ಕಣ್ಣುಗೆಟ್ಟರೆ ಬರುವುದೇ? ಎನ್ನ ಧನ ಜ್ಞಾನವೆಂಬಾಗಮದ ವಚನ ನಿನ್ನರಿದುಕೋ - ಎಂದು ತನಗೆ ತಾನು ಸಂತೈಸಿಕೊಂಡ. 

ತರುವಾಯ ಕಾಲಜ್ಞಾನವನ್ನು ಸಾರುತ್ತ ಕಲ್ಯಾಣದತ್ತ ಪಯಣಮಾಡಿದ. ಅಲ್ಲಿ ಬಸವಣ್ಣನವರ ದಾಸೋಹದ ಆಸೆಗಾಗಿ ನೆರೆದಿದ್ದ ವೇಷಧಾರಿ ಜಂಗಮರನ್ನು ಕಂಡು ಸಹಿಸದೆ ನಿಷ್ಠುರವಾಗಿ ನುಡಿದು ಅವರ ಕೋಪಕ್ಕೆ ಪಾತ್ರನಾದ. ಅವರು ಇವನ ಇಷ್ಟಲಿಂಗವನ್ನು ಕಿತ್ತುಕೊಂಡು ಪ್ರತಿಯಾಗಿ ಒಂದು ಕಲ್ಲುಗುಂಡನ್ನು ಕೊಟ್ಟರು. ಅದನ್ನು ಈತ ತನ್ನ ಕರಸ್ಥಳದಲ್ಲೇ ಅಡಗಿಸಿಕೊಂಡನೆಂದು ಪ್ರತೀತಿ. ಜಂಗಮರ ಕ್ರೌರ್ಯ ಈತನ ಘನಭಕ್ತಿಗೆ ಕರಗಿಹೋಯಿತು. ಸಮಯಾಚಾರಕ್ಕಿಂತಲೂ ಸ್ವಾನುಭವ ದೊಡ್ಡದೆಂದು ಘಟ್ಟಿವಾಳಯ್ಯ ಸಾರಿ ಹೇಳಿದ. ಇವನ ಸದಾಚಾರದ ಪ್ರಭಾವದಿಂದ ಕಪಟಾಚಾರಿಗಳೂ ಪ್ರಾಮಾಣಿಕ ಜಂಗಮರಾದರು. ನರ್ತನ ಕಾಯಕದಲ್ಲಿ ತೊಡಗಿರುವಾಗಲೇ ಒಂದು ದಿನ ಘಟ್ಟಿವಾಳಯ್ಯ ತನ್ನ ಕೊನೆಯುಸಿರನ್ನು ಎಳೆದ.

ಘಟ್ಟಿವಾಳಯ್ಯ ಅಂದಿನ ಶರಣರ ನಡುವೆ ಗಮನಾರ್ಹವಾದ ಸ್ಥಾನವನ್ನು ಗಳಿಸಿಕೊಂಡಿದ್ದ. ಅಲ್ಲಮಪ್ರಭು ಇವನನ್ನು ಕುರಿತು ಅಂಗದ ಮೇಲಣ ಲಿಂಗಕ್ಕಿಂಗ ಅಂಗದೊಳಗಣ ಲಿಂಗವ ಹಿಂಗದಂತಿರಬೇಕು, ಘಟ್ಟಿವಾಳಯ್ಯನಂತೆ - ಎಂದೂ ಚೆನ್ನಬಸವಣ್ಣ ಕೂಡಲ ಚೆನ್ನಸಂಗಾ, ನಿನ್ನ ಶರಣ ಘಟ್ಟಿವಾಳಯ್ಯನಲ್ಲದೆ ನೆರೆ ಅರಿವವರಾರೋ-ಎಂದೂ ಮೋಳಿಗೆಯ ಮಾರಯ್ಯ ಲೆಕ್ಕವಿಲ್ಲದ ಆಸೆ ಮನದೊಳಗೆ ಹೊಕ್ಕು ತಿರುಗಾಡುತಿಹ ಚಿಕ್ಕ ಮಕ್ಕಳಿಗೆಲ್ಲಿಯದೋ ನಿರ್ವಾಣ, ಘಟ್ಟಿವಾಳಂಗಲ್ಲದೆ-ಎಂದೂ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಅದೃಶ್ಯ ಕವಿ ಇವನನ್ನು ದೃಢಶರಣಸೀಮಂತ ಮಣಿ ಎಂದು ಕೊಂಡಾಡಿದ್ದಾನೆ.

ಘಟ್ಟಿವಾಳಯ್ಯ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗಾ ಎಂಬ ಅಂಕಿತದಿಂದ ನೂರಾರು ವಚನಗಳನ್ನು ರಚಿಸಿದ್ದಾನೆ. ಇವನ ವಚನಗಳಲ್ಲಿ ಸತ್ಯನಿಷ್ಠುರತೆ ಮತ್ತು ಸದಾಚಾರಗಳು ಎದ್ದುಕಾಣುತ್ತವೆ. ಉದಾಹರಣೆಗಾಗಿ ಒಂದೆರಡನ್ನು ನೋಡಬಹುದು:
ಕಾಯ ಜೀವವನರಿದೆನೆಂಬುವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ
ಹೊನ್ನು ಹೆಣ್ಣು ಮಣ್ಣಿಗೆ ಹೋರಿಯಾಡುವರೆಲ್ಲರು
ಬಸವಣ್ಣನ ಬಾಗಿಲಲ್ಲಿ ಬಂಧಿತರಾಗಿ ನೊಂದವರಿಗೇಕೆ
ಚಿಕ್ಕಯ್ಯ ಪ್ರಿಯ ಸಿದ್ಧಲಿಂಗಾ? ಇಲ್ಲ ಇಲ್ಲಾ ಎಂದೆ
ಇರಿವುದು, ಕಡಿವುದು, ಕೊಲುವುದು
ಮಲದೇಹಿಗಳಿಗಲ್ಲದೆ ನಿರ್ಮಲ ದೇಹಿಗಳಿಗುಂಟೆ?
ಹಾದಿಯ ಬೆಳ್ಳನ ಕಳ್ಳರು ತಾಗಿದರೆ 
ಇನ್ನಾರಿಗೆ ಮೊರೆಯಿಡುವ?
ಈ ಉರುಳುಗಳ್ಳರ ಭಕ್ತರು ಜಂಗಮವೆಂದರೆ ಒಪ್ಪೆನಯ್ಯಾ
ರೋಗಿಗೆ ಹಾಲು ಸಿಹಿಯಪ್ಪುದೆ?
ಗೂಗೆಗೆ ರವಿ ಲೇಸಪ್ಪುದೆ?
ಚೋರಂಗೆ ಬೆಳಗು ಗುಣವಪ್ಪುದೆ?
ಭವಸಾಗರದ ಸಮಯದಲ್ಲಿದ್ದವರಿಗೆ?
ನಿರ್ಭಾವನ ಭಾವವನೆತ್ತ ಬಲ್ಲರು?	(ಬಿ.ವಿ.ವಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ